ರಾಮಚಂದ್ರರಾವ್, ತಗಡೂರು
1897 - 1988. ಸುಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರರು. ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕು ಹನುಮನಪುರದಲ್ಲಿ 1897 ಅಕ್ಟೋಬರ್ 10 ರಂದು ಜನಿಸಿದರು. ತಂದೆ ಸೂರ್ಯನಾರಾಯಣಪ್ಪ. ತಾಯಿ ಲಕ್ಷ್ಮಮ್ಮ, ಈ ದಂಪತಿಗಳಿಗೆ ಇವರು ಮೂರನೆಯ ಮಗ, ಚಿಕ್ಕಂದಿನಲ್ಲಿಯೇ ತಾಯಿಯನ್ನು ಕಳೆದುಕೊಂಡರು. ಬಾಲ್ಯದಿಂದಲೂ ದೊಡ್ಡಮ್ಮನ ಕೈಗೂಸಾಗಿ ಬೆಳೆದರು. ತಂದೆ ತಾಯಿಯ ಪ್ರೀತಿ ಕಾಣದ ಇವರು ರಾಮಾಯಣ, ಭಾರತಗಳ ಪ್ರವಚನ ಕೇಳುವುದರ ಮೂಲಕ ಧೃಡಮನಸ್ಸು, ನೆಮ್ಮದಿಯನ್ನು ಪಡೆದುಕೊಂಡರು. ಇವರ ತಂದೆ ಶಾನುಭೋಗರು. ತಮ್ಮ ಧಾರಾಳತನದಿಂದ ಪೂರ್ವಿಕರ ಆಸ್ತಿಯನ್ನು ಕಳೆದುಕೊಂಡು. ಬಡತನ, ಏಕಾಂತಜೀವನ ಇವು ಇವರು ಅಂತರ್ಮುಖಿಯಾಗಿ ಚಿಂತಿಸುವಂತೆ ಮಾಡಿದವು. ತಂದೆಯ ಬಡತನ ಮತ್ತು ಅವರು ಎರಡನೆಯ ಮದುವೆಯಾದುದರಿಂದ ಅಕ್ಕನ ಆಸರೆಯನ್ನು ಪಡೆದರು. ಭಾವನಿಗೆ ಬಹಳಷ್ಟು ದಿನಗಳು ಭಾರವಾಗಬಾರದೆಂಬ ಭಾವನೆ ಇವರಲ್ಲಿ ಬೆಳೆಯಿತು. ಭಾವನ ಆಶ್ರಯ ತೊರೆದು ಸಂಗಡಿಗರೊಂದಿಗೆ ಜೀವಿಸತೊಡಗಿದರು. ನಿರಂತರವಾಗಿ ಬಂದೊದಗಿದ ಕಷ್ಟಗಳಿಂದಾಗಿ ಮಾನಸಿಕ ನೆಮ್ಮದಿ ಕೆಟ್ಟಿತು. ಇಂಥ ಸಂದರ್ಭದಲ್ಲಿ ಭಾರತವನ್ನು ಸುತ್ತಿದರು. ಹೀಗಾಗಿ ಸರಿಯಾದ ವಿದ್ಯಾಭ್ಯಾಸ ಇವರ ಪಾಲಿಗೆ ದೊರೆಯಲಿಲ್ಲ. ಮೈಸೂರು ಮತ್ತೆ ಇವರನ್ನು ಆಕರ್ಷಿಸಿತು. ಜೀವನೋಪಾಯಕ್ಕೆ ಸಣ್ಣ ವ್ಯಾಪಾರ ಆರಂಭಿಸಿದರು. ಈ ವ್ಯಾಪಾರದ ಮೂಲಕ ಹಲವು ಬಗೆಯ ಸ್ನೇಹಿತರು ಇವರಿಗೆ ದೊರೆತರು. ಚಳವಳಿಗಾರರಾಗುವ ಪ್ರೇರಣೆಯೂ ಒದಗಿತ್ತು. ಜನರಲ್ ಡಂiÀರ್‍ನ ಜಲಿಯನ್ ವಾಲಬಾಗ್‍ನ ಹತ್ಯಾಕಾಂಡದ ಚಿತ್ರಗಳು ಮಾರಾಟಕ್ಕಾಗಿ ಮಾರುಕಟ್ಟೆಗೆ ಬಂದುವು. ಈ ಚಿತ್ರಗಳ ಮಾರಾಟವನ್ನು ನಿಷೇಧಿಸಲಾಗಿತ್ತು. ಈ ಚಿತ್ರಗಳನ್ನು ತಮ್ಮ ತಳ್ಳಂಗಡಿಯಲ್ಲಿ ಮಾರುವುದರ ಮೂಲಕ ಸ್ವಲ್ಪ ಹಣವೂ ಇವರಿಗೆ ದೊರೆಯಿತು. ಹೋರಾಟದ ಮನೋಭಾವ ಮತ್ತು ಆತ್ಮಸ್ಥೈರ್ಯವೂ ಬೆಳೆಯಿತು. ಈ ಉದ್ಯೋಗವನ್ನು 1919ರಲ್ಲಿ ಬಿಟ್ಟು ತಗಡೂರು ಸೇರಿದರು. ಮುಂದೆ ಇದು ಇವರ ಎಲ್ಲ ರೀತಿಯ ಕಾರ್ಯ ಚಟುವಟಿಕೆಗಳಿಗೆ ಕೇಂದ್ರವಾಯಿತು.

(ಎಚ್.ಪಿ.ವಿ)

ರಾಮಚಂದ್ರರಾವ್ ಅವರನ್ನು ಒಮ್ಮೆ ಮುದವೀಡು ಕೃಷ್ಣರಾಯರು ತಗಡೂರ್ ಎಂದು ಕರೆದರು. ಮುಂದೆ ಜನ ಇವರನ್ನು ಇದೇ ಹೆಸರಿನಿಂದ ಗುರುತಿಸಿದರು. ದೇಶಭಕ್ತರಾಗಿದ್ದ ಉಡುಪು ಕೂಡ ಸ್ವದೇಶೀಯ ಸಂಕೇತವನ್ನು ಅನುಕರಿಸುತ್ತಿತ್ತು. ಅದು ರಾಷ್ಟ್ರಧ್ವಜವನ್ನು ಪ್ರತಿನಿಧಿಸುತ್ತಿತ್ತು. ತಲೆಗೆ ಕೇಸರಿ ವರ್ಣದ ಗಾಂಧಿ ಟೋಪಿ, ಹಸುರು ಬಣ್ಣದ ಜುಬ್ಬ, ಬಿಳಿ ಪಂಚೆಯಿಂದ ವ್ರತನಿಷ್ಠರಾಗಿದ್ದರು. ತಾವು ತೊಡುವ ಉಡುಪಿನ ಮೇಲೆಯೇ ಹಲವಾರು ಘೋಷಣೆಗಳನ್ನು ಬರೆದುಕೊಂಡು ಓಡಾಡುವ ಜಾಹೀರಾತಿನ ಮಾಧ್ಯಮವೂ ಆಗಿದ್ದರು. ಇದು ಇವರ ಸ್ವಾತಂತ್ಯ್ಯ ಹೋರಟದ ತೀವ್ರತೆಯನ್ನು ಪರಿಚಯಿಸುತ್ತದೆ. ಹಲವಾರು ಹಲವಾರು ಚಳವಳಿ, ಸತ್ಯಾಗ್ರಹಗಳಲ್ಲಿ ಪಾಲ್ಗೊಳ್ಳುವುದರ ಮೂಲಕ ಇವರು ತಗಡೂರಿನ ಬಾಪೂಜಿ ಎನಿಸಿದರು. ತಗಡೂರು ಇವರ ಸತ್ಯಾಗ್ರಹದ ಕೇಂದ್ರವಾದರೆ ಮೈಸೂರು ಇವರ ಬಿಡಾರಕೇಂದ್ರ. ಮೈಸೂರಿನ ಹಲವು ಗಣ್ಯವ್ಯಕ್ತಿಗಳ ಸಹಕಾರ ಮತ್ತು ಸಹಾಯ ಇದರ ಹೋರಾಟಕ್ಕೆ ಸ್ಫೂರ್ತಿನೀಡಿತು. ತಗಡೂರಿನ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಚರಕದ ಮಹತ್ತ್ವ ಸಾರಿ ನೂಲುವ ಮತ್ತು ನೇಯುವ ಕಾರ್ಯದಲ್ಲಿ ಜನರನ್ನು ತೊಡಗಿಸಿದರು. ಮನೆಗಳಲ್ಲಿ ಧೂಳು ತಿನ್ನುತ್ತಿದ್ದ ರಾಟೆಗಳನ್ನು ಹೊರತರುವಂತೆ ಪ್ರೇರೇಪಿಸಿದರು. ಹರಿಜನರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ ಖಾದಿ ಕೆಲಸ ಜೀವನೋಪಾಯಕ್ಕೆ ಮಾರ್ಗವಾಗುವಂತೆ ಮಾಡಿದರು. ಹರಿಜನ ಕ್ರೈಸ್ತ ಮತಾಂತರದ ವಿರುದ್ಧ ಹೋರಾಟ ನಡೆಸಿದರು. ತಗಡೂರಿನಲ್ಲಿ ಖಾದಿ ಉತ್ಪತ್ತಿಗಾಗಿ ಕರ್ನಾಟಕ ಖದ್ದರ್ ಪರಸ್ಪರ ಸಹಕಾರ ಸಂಘವನ್ನು ಸ್ಥಾಪಿಸಿದರು (1925).  ಸರ್ಕಾರ ಪತಿಕೆಗಳ ವಿರುದ್ಧ ಕರಾಳ ಶಾಸನವನ್ನು ಜಾರಿಗೆ ತಂದಾಗ (1908) ವರ ವಿರುದ್ಧ ಮೈಸೂರು ಪ್ರಾಂತ್ಯದಲ್ಲಿ ಹೋರಾಟವನ್ನು ಪ್ರಾರಂಭಿಸಿದರು. ಈ ಶಾಸನವನ್ನು ಹಿಂದಕ್ಕೆ ತೆಗೆದುಕೊಳ್ಳುವವರೆಗೂ ಹೋರಾಟ ಕೈಬಿಡಲಿಲ್ಲ. ಸೈಮನ ಕಮಿಷನ್ನಿನ ವಿರುಧ ಸತ್ಯಾಗ್ರಹದ ಮಾಡಿ ಮೊದಲ ಬಾರಿಗೆ ಜೈಲುವಾಸವನ್ನು ಅನುಭವಿಸಿದರು (1928). ಖಾದಿಯನ್ನು ಉಳಿಸಿ ಬೆಳೆಸಲು ಹಲವು ಬಾರಿ ಸತ್ಯಾಗ್ರಹ ಕೈಗೊಂಡರು. ಇವರ ವಿರೋಧಿಗಳು ತಗಡೂರಿನ ಆಶ್ರಮಕ್ಕೆ ಅಗ್ನಿಸ್ಪರ್ಶಮಾಡಿ ನಾಶಮಾಡಿದಾಗಲೂ ಎದೆಗುಂದದೆ ತಮ್ಮ ಧ್ಯೇಯ, ಧೋರಣೆಗಳನ್ನು ಮುಂದುವರೆಸಿದರು. ಖಾದಿ ಪ್ರಚಾರಕ್ಕಾಗಿ ಗಾಂಧೀಜಿ ಮೈಸೂರಿಗೆ ಬಂದಾಗ ತಗಡೂರಿಗೆ ಭೇಟಿ ನೀಡಿದರು. ಆ ಸಂಧರ್ಭದಲ್ಲಿ ತಗಡೂರರ ಕೆಲಸಕಾರ್ಯಗಳನ್ನು ಮೆಚ್ಚಿ ಪ್ರೋತ್ಸಾಹಿಸಿದರು. ಗಾಂಧೀಜಿ ತಗಡೂರಿಗೆ ನೀಡಿದ ಈ ಭೇಟಿಯ e್ಞÁಪಕಾರ್ಥವಾಗಿ ಇವರು ಹರಿಜನ ವಿದ್ಯಾರ್ಥಿನಿಲಯವನ್ನು ಪ್ರಾರಂಭಿಸಿದರು. ಜನರಲ್ಲಿ ಜಾಗೃತಿ ಬೆಳೆದಂತೆ ಈ ವಿದ್ಯಾರ್ಥಿನಿಯಲವನ್ನು ಮುಚ್ಚಿದರು.

1941ರಲ್ಲಿ ಸುಶೀಲಾಬಾಯಿ ಎಂಬುವರನ್ನು ಪಶ್ಚಿಮವಾಹಿನಿಯಲ್ಲಿ ಹಲವಾರು ಹಿತೈಷಿಗಳ ಸಮ್ಮುಖದಲ್ಲಿ ಇವರು ಮದುವೆಯಾದರು. ಬ್ರಿಟಷರೇ ಭಾರತಬಿಟ್ಟು ತೊಲಗಿ ಆಂದೋಲನಪ್ರಾರಂಭವಾದಾಗ (1942) ಅದರಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ದೇಶೀರಾಜರ ವಿರುದ್ಧ ಹೋರಟ ನಡೆಸಿದರು. ಮೈಸೂರು ಮಹಾರಾಜರು ಈ ಚಳುವಳಿಗೆ ಸೇರಬೇಕೆಂದು ಒತ್ತಾಯಿಸಿದರು. ಮಹಾರಾಜರನ್ನು ಅಣಕಮಾಡಿದ್ದರ ನೆಪದಿಂದ ಸರ್ಕಾರ ಎರಡು ವರ್ಷಗಳ ಕಾಲ ಇವರಿಗೆ ಜೈಲು ಶಿಕ್ಷೆ ವಿಧಿಸಿತು. 1957ರಲ್ಲಿ ವಿನೋಭಾಭಾವೆ ಅವರ ಜೊತೆ ಸೇರಿ ಭೂಧಾನ ಚಳವಳಿಯ ಯಾತ್ರೆ ಕೈಗೊಂಡರು. ಮೈಸೂರಿನಲ್ಲಿ ಕಾಂಗ್ರೆಸ್ಸಿನ ಉದಯಕ್ಕೂ ಬೆಳೆವಣಿಗೆಗೂ ಕಾರಣರಾದವರಲ್ಲಿ ಇವರೂ ಒಬ್ಬರೂ. ಇವರೊಬ್ಬ ದಿಟ್ಟ ಹೋರಾಟಗಾರರು, ರಚನಾತ್ಮಕ ಕಾರ್ಯಕರ್ತರು.  ಗ್ರಾಮೀಣ ಅಭಿವೃದ್ಧಿಗಾಗಿ ತಮ್ಮ ಜೀವನವನ್ನೇ ಅರ್ಪಿಸಿಕೊಂಡರು. ಇವರ ಪ್ರಯತ್ನದ ಫಲವಾಗಿ ತಗಡೂರಿನ ಖಾದಿ ಕೇಂದ್ರ ಹೆಸರಾಗಿದೆ. ಖಾದಿ ಕೇಂದ್ರದ ಉತ್ಪತ್ತಿಯ ನೆರವಿನಿಂದ ಊರಿನಲ್ಲೊಂದು ಪ್ರೌಢಶಾಲೆಯೂ ತಲೆ ಎತ್ತಿದೆ.

ಇವರ ಸೇವೆಯನ್ನು ಗುರುತಿಸಿದ ಮೈಸೂರಿನ ಅಭಿಮಾನಿಗಳು ಕರ್ಮಯೋಗಿ ಎಂಬ ಅಭಿನಂದನ ಗ್ರಂಥವನ್ನು ಇವರಿಗೆ ಅರ್ಪಿಸಿದರು (1974). ಈ ಗ್ರಂಥ ತಗಡೂರರ ಆತ್ಮಕಥೆಯನ್ನು ಒಳಗೊಂಡಿದೆ. ಜಮನ್‍ಲಾಲ್ ಪ್ರತಿಷ್ಠಾನ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿದೆ (1983. ಈ ಪ್ರಶಸ್ತಿಯ ಮೌಲ್ಯ ಒಂದು ಲಕ್ಷ ರೂಪಾಯಿ. ಇವರು ಮೈಸೂರು ಪ್ರಾಂತ್ಯದ ಭಾರತ - ಚೀನ ಸ್ನೇಹಸಂಘದ ಮತ್ತು ಭಾರತ - ರಷ್ಯ ಸ್ನೇಹಸಂಘದ ಅರ್ಧಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. 91 ವರ್ಷಗಳ ತುಂಬುಜೀವನ ನಡೆಸಿದ ಇವರು 1988 ಡಿಸೆಂಬರ್ 28 ರಂದು ನಿಧನರಾದರು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ